Saturday, July 16, 2011

ಭಾಷೆ ಮತ್ತು ಚಿಂತನೆ - ಸುಂದರ್‌ ಸಾರುಕ್ಕೆ| Jul 17, 2011

ಹಿಂದಿನ ಅಂಕಣ ಬರಹದಲ್ಲಿ ನಾವು ಚರ್ಚಿಸಿದಂತೆ, ಆಲೋಚನೆ ಎಂಬುದು ನೋಡುವಿಕೆಯ ಕ್ರಿಯೆಗೆ ಸಮನಾಗಿದೆ. ನಾವು ಗಾಢವಾಗಿ ಯೋಚಿಸುತ್ತಿರುವಾಗೆಲ್ಲ ಸುತ್ತಲಿನ ಯಾವುದರ ಮೇಲೂ ಕಣ್ಣೋಡಿಸುತ್ತಿರುವುದಿಲ್ಲ. ಒಂದೋ ನಾವು ಶೂನ್ಯವನ್ನು ದಿಟ್ಟಿಸುತ್ತಿರುತ್ತೇವೆ. ಇಲ್ಲವೇ ಯೋಚಿಸುವುದಕ್ಕೆಂದು ಕಣ್ಣು ಮುಚ್ಚಿಕೊಂಡಿರುತ್ತೇವೆ. ಇದು ಬಹುತೇಕ ನಮ್ಮ ಮನಸ್ಸಿನ ಆಲೋಚನೆಗಳನ್ನು ನಾವೇ ವೀಕ್ಷಿಸುವಂತಿರುತ್ತದೆ. ಅಥವಾ ಅವುಗಳನ್ನು ನಮ್ಮ "ಒಳಗಿವಿ'ಗಳ ಮೂಲಕ ಆಲಿಸಲು ನಡೆಸುವ ಯತ್ನದಂತಿರುತ್ತದೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಬದುಕಿನ ಆಳವಾದ ಸತ್ಯಗಳನ್ನು ಅನ್ವೇಷಿಸುವ ಕಾರ್ಯದಲ್ಲಿ ನಿತ್ಯಜೀವನದ ಆಗುಹೋಗುಗಳು ಅಡ್ಡ ಸೆಳೆತದ ರೂಪದ ಅಡ್ಡಿಯೆಂದೇ ಅನೇಕರ ಭಾವನೆ.

ನಾವು ನಮ್ಮ ಯೋಚನೆಗಳನ್ನು ಹೇಗೆ ಗ್ರಹಿಸುತ್ತೇವೆ? ನಮ್ಮ ಆಲೋಚನೆಗಳನ್ನು ನಾವೇ "ಕಾಣಲು' ಸಾಧ್ಯ ಎಂದು ಕೆಲವರು ಅಂದುಕೊಂಡಿರಬಹುದು. ಯೋಚನೆಗಳು "ಚಿತ್ರ'ಗಳಂತೆ ಎಂಬುದು ಬಹುಶಃ ಅವರ ನಂಬಿಕೆ. ಆದರೆ ಯೋಚನೆಗಳನ್ನು ಗ್ರಹಿಸುವ ಬಹುತೇಕ ಸಾಮಾನ್ಯ ವಿಧಾನವೆಂದರೆ ಅವುಗಳನ್ನು "ಆಲಿಸುವುದು'. ಹೌದು, ನಾವು ನಮ್ಮ ಯೋಚನೆಗಳನ್ನು ನಮ್ಮ ಒಳಗಿನಿಂದ ಕೇಳಿಸಿಕೊಳ್ಳುತ್ತೇವೆ; ಹಾಗಾಗಿಯೇ ನಮ್ಮಲ್ಲಿ ಆಲೋಚನೆ ಇದೆ ಎಂಬ ಅರಿವು ನಮ್ಮಲ್ಲಿ ಮೂಡುವುದು. ಯೋಚನೆಗಳನ್ನು ಕೇಳಿಸಿಕೊಳ್ಳುವುದೆಂದರೆ, ಅದು ನಾವು ನಮ್ಮಲ್ಲೇ ಮಾತನಾಡಿಕೊಳ್ಳುವ ಒಂದು ಕ್ರಮ. "ಊಟದ ಸಮಯವಾಯಿತು' - ಎಂದು ನಾನು ನನ್ನಲ್ಲೇ ಹೇಳಿಕೊಳ್ಳುತ್ತೇನೆ. "ಸಭೆ ಎಷ್ಟು ಗಂಟೆಗೆ' - ಎಂದು ನನ್ನಲ್ಲೇ ನಾನು ಕೇಳಿಕೊಳ್ಳುತ್ತೇನೆ. "ಕ್ರಿಕೆಟ್‌ ಮ್ಯಾಚ್‌ ನಡೆಯುತ್ತಾ ಇದೆ, ಎಷ್ಟಾಗಿರಬಹುದು ಸ್ಕೋರ್‌' - ಎಂದು ನನ್ನಲ್ಲೇ ಕುತೂಹಲ - ಅಚ್ಚರಿ ವ್ಯಕ್ತಪಡಿಸುತ್ತಿರುತ್ತೇನೆ. ಹೀಗೆ ನಾವು ನಮ್ಮಲ್ಲೇ ಸಂಭಾಷಿಸಿಕೊಳ್ಳುತ್ತಿರುತ್ತೇವೆ. ಇವೆಲ್ಲವೂ ಯೋಚನೆಗಳೇ.

ಸರಿ, ನಾವು ನಮ್ಮಲ್ಲೇ ಮಾತನಾಡಿಕೊಳ್ಳುತ್ತೇವಲ್ಲ, ಯಾವ ಭಾಷೆಯಲ್ಲಿ? ನನಗೆ ಗೊತ್ತಿರುವುದು ಒಂದೇ ಭಾಷೆ - ಕನ್ನಡ - ಎಂದಿಟ್ಟುಕೊಳ್ಳೊàಣ. ಹಾಗಿದ್ದಲ್ಲಿ ಈ ಆತ್ಮ ಸಂಭಾಷಣೆ ಕನ್ನಡದಲ್ಲೇ ಎಂಬುದು ಸ್ಪಷ್ಟ . ಆದರೆ ನನಗೆ ಒಂದಕ್ಕಿಂತ ಹೆಚ್ಚು ಭಾಷೆಗಳು - ಕನ್ನಡ, ಇಂಗ್ಲಿಷ್‌, ಹಿಂದಿ ಇತ್ಯಾದಿಗಳು - ಗೊತ್ತಿದ್ದರೆ? ಆಗ ನಾನು ಯೋಚಿಸುವುದು ಯಾವ ಭಾಷೆಯಲ್ಲಿ? ಮಾತೃಭಾಷೆ ಕನ್ನಡ; ವಿದ್ಯಾಭ್ಯಾಸವಾಗಿರುವುದು ಇಂಗ್ಲಿಷ್‌ ಮಾಧ್ಯಮದಲ್ಲಿ ಎಂದಾದರೆ, ನಮ್ಮ ಯೋಚನೆಯ ಭಾಷೆ ಯಾವುದಾಗಿರುತ್ತದೆ?

ಇಂಥ ಪ್ರಶ್ನೆಗಳಿಗೆಲ್ಲಕ್ಕೂ ಸಾಮಾನ್ಯವಾಗಿ ಅನ್ವಯವಾಗುವಂಥ ಒಂದೇ ಉತ್ತರ ಸಿಗಬೇಕೆಂದಿಲ್ಲ. ನಾವು ಯಾವ ಭಾಷೆಯಲ್ಲಿ ಯೋಚಿಸುತ್ತೇವೆಂಬುದನ್ನು ಅರಿತುಕೊಳ್ಳಲು ನಮ್ಮ ಮೇಲೆಯೇ ಒಂದು ಪ್ರಯೋಗ ನಡೆಸಿಕೊಳ್ಳಬೇಕಾಗಿ ಬರಬಹುದು! ಬಹುಶಃ ಹೀಗೆ ಹೇಳಬಹುದೇನೋ: ಯಾವುದೇ ಒಂದು ಭಾಷೆಯಲ್ಲಿ ಮಾತಾಡುವುದಾಗಲಿ ಬರೆಯುವುದಾಗಲಿ ಅಭ್ಯಾಸವಾಯಿತೆಂದರೆ ಮೂಲತಃ ಅದೇ ಭಾಷೆಯಲ್ಲಿ ಯೋಚಿಸಲು ಸಜ್ಜಾಗಿರುತ್ತೇವೆ. ಜತೆಗೆ, ನಾವು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಲ್ಲವರಾಗಿದ್ದಲ್ಲಿ ಭಿನ್ನ ಭಿನ್ನ ಸಂದರ್ಭಗಳಲ್ಲಿ ಭಿನ್ನ ಭಿನ್ನ ಭಾಷೆಗಳನ್ನು ಬಳಸಬಹುದು. ವಿಜ್ಞಾನದಂಥ ವಿಷಯಗಳ ಬಗ್ಗೆ ಇಂಗ್ಲಿಷ್‌ನಲ್ಲಿ ಯೋಚಿಸಬಹುದು. ಅದೇ, ಸಾಹಿತ್ಯ, ಕಾವ್ಯ ಇತ್ಯಾದಿಗಳ ಬಗ್ಗೆ ಚಿಂತಿಸುವಾಗೆಲ್ಲ ಕನ್ನಡದಲ್ಲೇ ಯೋಚಿಸಬಹುದು.

ಇಂಥದೇ ಇನ್ನೊಂದು ಜಿಜ್ಞಾಸೆ - ನಾವು ಭಾವ ನಿರ್ಭರರಾಗಿರುವ ಸಂದರ್ಭದಲ್ಲಿ ನಮ್ಮೊಳಗಿನ ಭಾವನೆಗಳ ಕುರಿತಾಗಿ ಯೋಚಿಸುತ್ತ ಕೂರುವುದು ಯಾವ ಭಾಷೆಯಲ್ಲಿ ?
ಏನಿದ್ದರೂ, ನಾವು ಯೋಚಿಸುವಾಗ ಬಳಸುವ ಭಾಷೆ ಯಾವುದು - ಎಂಬುದು ನಿಜವಾಗಿಯೂ ಮುಖ್ಯವೆ? ಒಂದೇ ರೀತಿಯ ಯೋಚನೆಗಳನ್ನು ನಾವು ಕನ್ನಡದಲ್ಲೂ ಇಂಗ್ಲಿಷ್‌ನಲ್ಲೂ ಮಾಡುವುದಿಲ್ಲವೆ? ಇಲ್ಲ, ಬೇರೆ ಬೇರೆ ಭಾಷೆಗಳಲ್ಲಿ ಯೋಚಿಸುವಂಥ ಸಂದರ್ಭಗಳಲ್ಲಿ ನಮ್ಮ ಯೋಚನೆಗಳೂ ಬೇರೆ ಬೇರೆಯಾಗಿರುತ್ತವೆ ಎಂಬುದಕ್ಕೆ ಅನೇಕ ಸಕಾರಣಗಳನ್ನು ಕೊಡಬಹುದು. ಎಲ್ಲಕ್ಕಿಂತ ಮೊದಲ ಕಾರಣವೆಂದರೆ ನಾವು ಯೋಚಿಸುವುದು ವ್ಯಾಕರಣಬದ್ಧವಾಗಿ. ನಮ್ಮ ಯೋಚನೆ ಯಾವ ಭಾಷೆಯಲ್ಲಿರುತ್ತದೆಯೋ, ಅದೇ ಭಾಷೆಯ ವ್ಯಾಕರಣದ ನಿಯಮವನ್ನದು ಪಾಲಿಸಿರುತ್ತದೆ. "ಸಾನಿಯಾ ಓರ್ವ ಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರ್ತಿ' ಎಂದು ನಾವು ಅಂದುಕೊಂಡಾಗ, ನಮ್ಮಿà ಯೋಚನೆ ಒಂದು ನಿರ್ದಿಷ್ಟ ಭಾಷೆಯ ವ್ಯಾಕರಣ ಸೂತ್ರಕ್ಕೆ ಬದ್ಧವಾಗಿರುತ್ತದೆ. "ಆಟಗಾರ್ತಿ ಬ್ಯಾಡ್ಮಿಂಟನ್‌ ಶ್ರೇಷ್ಠ ಓರ್ವ ಸಾನಿಯಾ' ಎಂದೇನೂ ನಾವು ವ್ಯಾಕರಣರಹಿತವಾಗಿ ಯೋಚಿಸಿರುವುದಿಲ್ಲ. ಹೀಗೆ ನಮ್ಮ ಯೋಚನೆಗಳು ವ್ಯಾಕರಣಬದ್ಧವಾಗಿಯೇ ಹೊಮ್ಮುವುದು ಹೇಗೆ? ಕನ್ನಡ, ಇಂಗ್ಲಿಷ್‌ನಂಥ ವಿವಿಧ ಭಾಷಾವರ್ಗಗಳ ವ್ಯಾಕರಣ ನಿಯಮಗಳು ನಮ್ಮ ಯೋಚನೆಗಳ "ಹೇಗೆ' ಹಾಗೂ "ಏನು'ಗಳನ್ನು ನಿರ್ಧರಿಸುತ್ತವೆಯೆ?

ಎರಡನೆಯದಾಗಿ, ಯೋಚಿಸುವ ಹೊತ್ತಿನಲ್ಲಿ ನಾವು ಬೇರೆ ಬೇರೆ ಭಾಷೆಗಳಲ್ಲಿನ ಭಿನ್ನ ಭಿನ್ನ ಪಾರಿಭಾಷಿಕ ಪರಿಕಲ್ಪನೆಗಳನ್ನು ಬಳಸಿಕೊಂಡಿರುತ್ತೇವೆ. ಉದಾಹರಣೆಗೆ, ಕನ್ನಡದಲ್ಲಿ "ಚಿಕ್ಕಪ್ಪ' , "ದೊಡ್ಡಪ್ಪ' ಎಂಬ ಪದಗಳಿವೆ. ಆದರೆ, ಇಂಗ್ಲಿಷ್‌ನಲ್ಲಿ "ಅಂಕಲ್‌' ಮಾತ್ರ ಇದ್ದಾರೆ. "ನನ್ನ ಚಿಕ್ಕಪ್ಪ ಇವತ್ತು ಮನೆಗೆ ಬರುವವರಿದ್ದಾರೆ' ಎಂಬ ಯೋಚನೆ ಬಂತೆಂದುಕೊಳ್ಳಿ . "ಇದೇ' ಯೋಚನೆ ಇಂಗ್ಲಿಷ್‌ನಲ್ಲಿ ಮೂಡಿತೆಂದಾದರೆ "ನನ್ನ ಅಂಕಲ್‌ ಇವತ್ತು ಮನೆಗೆ ಬರುವವರಿದ್ದಾರೆ' ಎಂದಷ್ಟೇ ಆಗುತ್ತದೆ. ಈ ಎರಡು ಯೋಚನೆಗಳಲ್ಲಿ ಮೂಲಭೂತ ವ್ಯತ್ಯಾಸ ಇಲ್ಲವೆ? ಆದ್ದರಿಂದ ವಿವಿಧ ಭಾಷೆಗಳ ಪಾರಿಭಾಷಿಕ ಕಲ್ಪನೆಗಳು ಕೂಡ ನಾವು ಏನನ್ನು /ಹೇಗೆ ಯೋಚಿಸುತ್ತೇವೆಂಬುದರ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆಂಬುದು ನಿಜ.

ಇನ್ನು ನಮ್ಮಲ್ಲಿರುವ ಶಬ್ದ ಬಂಡವಾಳ ಎಷ್ಟೆಂಬುದು ಕೂಡ ನಮ್ಮ ಆಲೋಚನೆ/ಚಿಂತನೆಯ ಮೇಲೆ ತನ್ನದೇ ಪ್ರಭಾವವನ್ನು ಬೀರುತ್ತದೆ. ಭಾಷೆಯೊಂದರ ಮೇಲೆ ನಮಗೆ ಒಳ್ಳೆಯ ಹಿಡಿತವಿದ್ದಲ್ಲಿ ಒಳ್ಳೊಳ್ಳೆಯ ಪದಗಳನ್ನು, ಪಾರಿಭಾಷಿಕಗಳನ್ನು ಬಳಸಬಹುದು. ಈ ಮೂಲಕ ನಮ್ಮ ಚಿಂತನೆಯನ್ನು ಸಂಕೀರ್ಣಗೊಳಿಸಿಕೊಳ್ಳಬಹುದು. ಹೀಗಾಗಿ, ನಮ್ಮಲ್ಲಿನ ಭಾಷಿಕ ಕೊರತೆಯೆಂದರೆ ನಮ್ಮಲ್ಲಿನ ಯೋಚನೆಗಳ ಕೊರತೆಯೇ. ಭಾಷೆಗಳು ನಮ್ಮ ಯೋಚನೆಯ ಪರಿಯನ್ನು ಪ್ರಭಾವಿಸುವುದರಿಂದಾಗಿ, ಇಂಗ್ಲಿಷ್‌ನಲ್ಲಿ ಯೋಚಿಸುವುದಕ್ಕಿಂತ ಭಿನ್ನವಾಗಿ ಕನ್ನಡದಲ್ಲಿ ಯೋಚಿಸುತ್ತೇವೆ ಎಂದು ನಾವು ನಿಸ್ಸಂದೇಹವಾಗಿ ಹೇಳಬಹುದು.

ಭಾಷೆ ಮತ್ತು ಚಿಂತನೆಗಳ ನಡುವಿನ ಈ ಸಂಬಂಧ ವ್ಯಾವಹಾರಿಕವಾಗಿಯೂ ತನ್ನ ಪ್ರಭಾವ ಬೀರಬಲ್ಲುದು. ಅನೇಕ ವಿದ್ಯಾರ್ಥಿಗಳು ಹಾಗೂ ವಯಸ್ಕರು ಬರೆಯುವ ಸಂದರ್ಭ ಬಂದಾಗ ಒದ್ದಾಡುವುದುಂಟು. ಎಷ್ಟೋ ಬಾರಿ ಬರೆಯುವ ಸಮಸ್ಯೆ ಉದ್ಭವಿಸುವುದು ಆಲೋಚನೆ/ಚಿಂತನೆಗೆ ಸಂಬಂಧಿಸಿದ ಸಮಸ್ಯೆಯಿಂದಲೇ. ಆಲೋಚನೆ ಸುಸ್ಪಷ್ಟವಾಗಿದ್ದಲ್ಲಿ ಬರವಣಿಗೆಯೂ ಸ್ಪಷ್ಟವಾಗಿರುತ್ತದೆ; ಹೆಚ್ಚು ಸುಲಭವೂ ಆಗುತ್ತದೆ.
ಹಾಗಾದರೆ, ಸ್ಪಷ್ಟವಾಗಿ ಯೋಚಿಸುವ ಬಗೆ ಹೇಗೆ? ಆಲೋಚಿಸುವಾಗ ನಾವು ಯಾವ ರೀತಿಯ ಪ್ರಮಾದಗಳನ್ನು ಎಸಗುತ್ತೇವೆ?

ನಿಮ್ಮಲ್ಲೊಂದು ಆಲೋಚನೆ ಮೂಡುತ್ತದೆ ಎಂದಿಟ್ಟುಕೊಳ್ಳೊàಣ. ಆಲೋಚನೆ ಯಾವಾಗಲೂ ಒಂದು ವಾಕ್ಯದ ರೂಪದಲ್ಲಿರುತ್ತದೆ. ಆಮೇಲೆ ನಿಮಗೆ ಇನ್ನೊಂದು ಯೋಚನೆ ಬಂತು. ಇದು ಕೂಡ ಇನ್ನೊಂದು ವಾಕ್ಯವೇ. ಮೂರನೆಯದೊಂದು ಆಲೋಚನೆ ಮೂಡಿದರೆ, ಅದು ಕೂಡ ಇನ್ನೊಂದೇ ವಾಕ್ಯ. ಚಿಂತನೆಯೆಂದರೆ ಒಂದು ಯೋಚನೆಯಿಂದ ಇನ್ನೊಂದಕ್ಕೆ ಸಾಗುವುದಲ್ಲದೆ ಇನ್ನೇನಲ್ಲ. ಹೀಗೆ ಒಂದರಿಂದ ಇನ್ನೊಂದು ಆಲೋಚನೆಯ ಕಡೆಗೆ ಸಾಗುವ ಬಗೆಯೇ ನಿಜವಾಗಿ ಚಿಂತನೆಯ ಪ್ರಕ್ರಿಯೆಯ ಪರಿಯನ್ನು ಸೂಚಿಸುವಂಥ ವಿಧಾನವಾಗಿದೆ.

ಹೀಗೆ, ಚಿಂತನೆಯೆಂದರೆ ವಿವಿಧ ವಾಕ್ಯಗಳನ್ನು ಒಂದರ ಬಳಿಕ ಇನ್ನೊಂದರಂತೆ ಇರಿಸುವ ಪ್ರಕ್ರಿಯೆ. ಸ್ಪಷ್ಟ / ನಿಖರ ಆಲೋಚನೆಯೆಂದರೆ ಈ ವಾಕ್ಯಗಳ ಪೈಕಿ ಒಂದೊಂದರ ಜತೆಗೂ ಇನ್ನೊಂದು ಹೊಂದಿರುವ ನಿಖರ ಸಂಬಂಧ. ಉದಾಹರಣೆಗೆ, ನನ್ನ ಮೊದಲ ಯೋಚನೆ, "ಇವತ್ತು ಮಳೆ ಬರಬಹುದು' ಎಂಬುದಾಗಿರುತ್ತದೆ ಅಂದುಕೊಳ್ಳೊàಣ. ಎರಡನೆಯ ಯೋಚನೆ, "ಭಾರತ ವೆಸ್ಟಿಂಡೀಸ್‌ನಲ್ಲಿ ಗೆಲ್ಲಬಹುದೆ?' ಎಂಬುದಾಗಿರುತ್ತದೆಂದುಕೊಳ್ಳಿ. ಈಗ ಈ ಎರಡೂ ವಾಕ್ಯಗಳನ್ನು ಕೇಳಿಸಿಕೊಂಡ ನೀವು ಹೇಳುತ್ತೀರಿ - "ಏನು ಯೋಚಿಸುತ್ತಿದ್ದಾನಯ್ಯ ಈ ಮನುಷ್ಯ! ಎರಡನೆಯ ಯೋಚನೆಗೆ ಮೊದಲಿನದರ ಜತೆಗೆ ಸಂಬಂಧವೇ ಇಲ್ಲವಲ್ಲ!'

ಒಂದು ವೇಳೆ ನನ್ನ ಎರಡನೆಯ ಯೋಚನೆ "ನಾನು ಛತ್ರಿ ಒಯ್ಯಬೇಕು' ಎಂದಾಗಿದ್ದರೆ, ಈ ಯೋಚನೆ ತಾರ್ಕಿಕವಾಗಿದೆ ಅಂದುಕೊಳ್ಳಬಹುದು. ಯಾಕೆಂದರೆ, ಎರಡು ಯೋಚನೆಗಳೂ (ವಾಕ್ಯಗಳೂ) ಒಂದರೊಡನೊಂದು ಸಂಬಂಧ ಹೊಂದಿವೆ. ಮೂಲಭೂತವಾಗಿ ತರ್ಕವೆಂದರೆ ಇದೇ - ವಾಕ್ಯಗಳ ನಡುವೆ ಸೂಕ್ತ ಸಂಬಂಧವನ್ನು ಹುಡುಕಿಕೊಳ್ಳುವುದು. ಹೀಗಾಗಿಯೇ ನಿಸ್ಸಂದಿಗ್ಧ ನಿಖರ ಆಲೋಚನೆ/ಚಿಂತನೆ ಬರವಣಿಗೆಯಲ್ಲಿ ಉಪಯುಕ್ತ. ಕಾರಣ, ನಾವು "ಸ್ಪಷ್ಟ'ವಾಗಿ ಬರೆಯುವ ಸಂದರ್ಭದಲ್ಲಿ ವಾಕ್ಯಗಳು ಪರಸ್ಪರ ಸಂಬಂಧ ಹೊಂದಿರುವುದನ್ನು ಖಾತರಿಪಡಿಸಿಕೊಂಡಿರುತ್ತೇವೆ. "ವಿಮಶಾìತ್ಮಕ ಚಿಂತನೆ'ಯು ಇಂಥ ಸಾವಧಾನಪೂರ್ಣ ಆಲೋಚನಾ ಕ್ರಮವನ್ನು ಒಳಗೊಂಡೇ ಇರುತ್ತದೆ.

ಆದರೆ, ಮಾನವ-ಚಿಂತನೆಯಲ್ಲಿ ಕಾಣಿಸಿಕೊಳ್ಳಬಲ್ಲ ಒಂದು ವಿರೋಧಾಭಾಸ ಇದು; ನಾವು ಹೀಗೆ ನಿಖರವಾಗಿ ಯೋಚಿಸಬಲ್ಲೆವು ಎಂಬುದು ಒಂದು ಸಾಧ್ಯತೆ; ಇನ್ನೊಂದು ಸಾಧ್ಯತೆಯೆಂದರೆ, ಒಂದು ಯೋಚನೆಯಿಂದ ಇನ್ನೊಂದಕ್ಕೆ ಸೃಜನಶೀಲ ನೆಗೆತಗಳನ್ನು ಸಾಧಿಸುವ ಅದ್ಭುತ ಸಾಮರ್ಥ್ಯ. ಮಳೆ ನೋಡಿದೊಡನೆ ಹೆಚ್ಚಿನವರಿಗೆ ಸಹಜವಾಗಿ ಛತ್ರಿಯ ಯೋಚನೆ ಬಂದೀತು. ಆದರೆ ಒಬ್ಬ ಸಾಹಿತಿ, ಒಬ್ಬ ಕವಿ, ಒಬ್ಬ ಕಲಾವಿದ ಮಳೆಯನ್ನು ಕಂಡೊಡನೆ ಅವರು ಸಂಪೂರ್ಣವಾಗಿ ಬೇರೆಯೇ ರೀತಿಯಲ್ಲಿ ಆಲೋಚಿಸಬಹುದು. ಆಲೋಚನೆಯ/ಚಿಂತನೆಯ ಈ ಎರಡೂ ವಿಧಾನಗಳಲ್ಲಿ ಪರಿಣತಿ ಸಾಧಿಸಿಕೊಳ್ಳುವುದು ಹೇಗೆ ಎಂಬುದೇ ನಮ್ಮಲ್ಲಿ ಪ್ರತಿಯೊಬ್ಬರ ಪಾಲಿಗೂ ಎದುರಾಗುವ ಸವಾಲು. ಇಂಥ ಸೃಜನಶೀಲ ಚಿಂತನೆಯ ಕುರಿತು ಮುಂದಿನ ಬರಹದಲ್ಲಿ ಚರ್ಚಿಸಲಿದ್ದೇನೆ.

No comments:

Post a Comment