Saturday, July 16, 2011

ಚಿಂತನೆ ಎಂಬ ಮಾನಸಿಕ ಪ್ರಕ್ರಿಯೆ - ಸುಂದರ್‌ ಸಾರುಕ್ಕೆ | Jul 10, 2011

ನಾವು ಆಲೋಚಿಸುವ ಹೊತ್ತಿನಲ್ಲಿ ಸಾಮಾನ್ಯವಾಗಿ ಏನು ಮಾಡುತ್ತಿರುತ್ತೇವೆ? ಯೋಚನೆಯಲ್ಲಿ ಮುಳುಗಿದ ಹೆಚ್ಚಿನ ಮಂದಿ ಎಲ್ಲೋ ಕಳೆದುಹೋದಂತಿರುತ್ತಾರೆ, ಶೂನ್ಯವನ್ನು ದಿಟ್ಟಿಸುತ್ತಿರುವಂತೆ ತೋರಿಬರುತ್ತಾರೆ. ಸುತ್ತಮುತ್ತ ಇರುವವರ ಬಗ್ಗೆ ಯಾವುದೇ ಸ್ಪಂದನ ತೋರದಂತಿರುತ್ತಾರೆ. ಯಾರಾದರೂ ತುಂಬ ಯೋಚಿಸುತ್ತಿರುವುದನ್ನು ಕಂಡಾಗ ಕೊಂಚ ಭೀತಿಗೊಳಗಾಗುತ್ತೇವೆ. "ಏನು, ನಿನ್ನ ಆರೋಗ್ಯ ಚೆನ್ನಾಗಿಲ್ಲವೆ' ಎಂದೆಲ್ಲ ವಿಚಾರಿಸಹೊರಡುತ್ತೇವೆ! ಹೌದು, ನಾವು ಯೋಚನೆಯಲ್ಲಿರುವಾಗ ನಮಗೆ ನಿಜಕ್ಕೂ ಏನಾಗುತ್ತದೆ?

ಆಲೋಚನೆ ಯಾವಾಗಲೂ ಮನಸ್ಸಿಗೆ ಸಂಬಂಧಿಸಿದ್ದಾಗಿದೆ. ಆದರೆ, ಎಲ್ಲಕ್ಕಿಂತ ಮೊದಲಿಗೆ ಮನಸ್ಸೆಂದರೇನು? ಅದು ಎಲ್ಲಿದೆ? ಮನಸ್ಸು ದೇಹಕ್ಕಿಂತ ಭಿನ್ನ ಎಂಬುದನ್ನು ಇಂದು ನಮ್ಮಲ್ಲಿ ಹೆಚ್ಚಿನವರು ಬಲ್ಲರು. ಆದರೆ, ಹೊಟ್ಟೆ ನೋವಾದಾಗ, ಇಲ್ಲಿ ನೋಯುತ್ತಿದೆ ಎಂದು ಹೊಟ್ಟೆಯತ್ತ ಬೆಟ್ಟು ಮಾಡಿ ಹೇಳುವಂತೆಯೇ ನಾವು ಯೋಚಿಸುತ್ತಿದ್ದೇವೆಂದು ಸೂಚಿಸಲು ತಲೆಯತ್ತ ಬೆರಳು ತೋರಿಸುತ್ತೇವೆ. ಗಣಿತ ವಿದ್ವಾಂಸ-ತಣ್ತೀಶಾಸ್ತ್ರಜ್ಞ   ರೆನೆ ಡೆಕಾರ್ಟೆಯ ಚಿಂತನೆಯ ಪ್ರಭಾವದಿಂದ ಬಹುತೇಕ ರೂಪುಗೊಂಡಂತಿರುವ ಆದುನಿಕ ತಣ್ತೀಶಾಸ್ತ್ರೀಯ ಹಾಗೂ ವೈಜ್ಞಾನಿಕ ದೃಷ್ಟಿಕೋನದ ಪ್ರಕಾರ ಮನಸ್ಸೆಂಬುದು ದೇಹದ ಹಾಗೆ ಇಲ್ಲವೇ ಇಲ್ಲ. ದೇಹ ಖಾಲಿ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ರೀತಿಯಲ್ಲಿ ಮನಸ್ಸು ಯಾವುದೇ ಖಾಲಿ ಅವಕಾಶದಲ್ಲಿ ತನ್ನನ್ನೆ ತುಂಬಿಕೊಂಡು ನಿಲ್ಲುವುದಿಲ್ಲ. ಅಂದರೆ, ಮನಸ್ಸಿಗೆ ಶರೀರಕ್ಕಿರುವಂತೆ ಗಾತ್ರವಿಲ್ಲ, ರೂಪವಿಲ್ಲ, ತೂಕವಿಲ್ಲ, ಪದಾರ್ಥ ಲಕ್ಷಣಗಳಿಲ್ಲ.

ಕುತೂಹಲಕಾರಿ ಸಂಗತಿಯೆಂದರೆ ಭಾರತೀಯ ತಣ್ತೀಶಾಸ್ತ್ರಸಂಬಂಧಿ ಜ್ಞಾನ ಶಾಖೆಗಳು ಮನಸ್ಸಿನ ಬಗ್ಗೆ ತಮ್ಮದೇ ವಿಭಿನ್ನ ದೃಷ್ಟಿಕೋನವನ್ನು ಹೊಂದಿವೆ. ಸಾಂಖ್ಯರ ಪ್ರಕಾರ ಮನಸ್ಸು ಒಂದು ಆಂತರಿಕ ಅವಯವ; ಅಂತರಂಗ. ಅದು ಭೌತಿಕ ಶರೀರಕ್ಕಿಂತ ಬೇರೆಯೇ ಆದ ದ್ರವ್ಯ/ಪದಾರ್ಥಗಳಿಂದ ನಿರ್ಮಿತವಾಗಿದೆ. ಈ ದ್ರವ್ಯ ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿದೆ. ಎಲ್ಲ ಧ್ಯಾನ ಸಾಧನ ಪದ್ಧತಿ-ಪರಂಪರೆಗಳಲ್ಲಿ ಮನಸ್ಸಿಗೆ ಬಹುಮುಖ್ಯ ಸ್ಥಾನವಿದೆ. ವಾಸ್ತವವಾಗಿ, ಧ್ಯಾನವೆಂದರೆ ಎಲ್ಲಕ್ಕಿಂತ ಮೊದಲಿಗೆ, ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸಿನ ನಿಯಂತ್ರಣವೇ. ತಣ್ತೀಶಾಸ್ತ್ರ ಅಧ್ಯಯನ ಕ್ರಮದಲ್ಲಿ ಮನಃತಣ್ತೀಶಾಸ್ತ್ರ ಎಂಬ ಒಂದು ಪ್ರತ್ಯೇಕ ಶಾಖೆಯೇ ಇದೆ. ಮನಸ್ಸಿನ ಸ್ವಭಾವವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ , ಈ ಶಾಖೆಯದು.

ಮನಸ್ಸು ಎಂದು ಕರೆಸಿಕೊಳ್ಳುವ ಏನೋ ಒಂದು ಇದೆ ಎಂಬುದನ್ನು ನಾವು ಒಪ್ಪಿಕೊಳ್ಳುವುದಾದರೆ, ಆಲೋಚನೆ ಒಂದು ಮಾನಸಿಕ ಪ್ರಕ್ರಿಯೆಯೆಂದು ಅರ್ಥಮಾಡಿಕೊಳ್ಳಲು ಸಾಧ್ಯ. ಯೋಚನೆಗಳು, ಚಿಂತನೆಗಳು ಮಾನಸಿಕವೇ ಆಗಿವೆ. ಅವು ದೇಹ, ಕುರ್ಚಿ, ಮರಗಳಂಥ ಭೌತಿಕ ವಸ್ತುಗಳಿಗಿಂತ ಭಿನ್ನ. ಯೋಚನೆಗಳು ಮಾನಸಿಕವೆಂಬುದು ಹೌದಾದರೂ ನಾವು ಅವುಗಳನ್ನು ಅನುಭವಿಸುವುದು ಸಾಧ್ಯ. ಇನ್ನೂ ವಿಶೇಷವೆಂದರೆ ನಾವು ಈ ಯೋಚನೆಗಳನ್ನು/ಚಿಂತನೆಗಳನ್ನು ಆಲಿಸುವುದೂ ಸಾಧ್ಯ. ಪ್ರಜ್ಞಾವಂತ ಯೋಚನೆಗಳೆಂದರೆ, ನಮಗೆ ನಮ್ಮೊಳಗೇ ಕೇಳಿಸಿದ ಯೋಚನೆಗಳೇ.

ನಮಗೆ ಯೋಚನೆಗಳಿವೆ. ನಾವು ಯೋಚನೆಗಳನ್ನು ಮಾಡುತ್ತಲೇ ಸಾಗುತ್ತಿರುತ್ತೇವೆ. ಯೋಚನೆಗಳಿಲ್ಲದೆ ಇರುವುದೆಂದರೆ ಕಷ್ಟವೇ. ಯೋಚನೆಗಳು ಒಮ್ಮೆ ಆರಂಭಗೊಂಡವೆಂದರೆ ಅವುಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ಒಂದು ಯೋಚನೆ ಇನ್ನೊಂದಕ್ಕೆ , ಆ ಇನ್ನೊಂದು ಮತ್ತೂಂದಕ್ಕೆ ಹಾದಿ ಮಾಡಿಕೊಡುತ್ತ ಇರುವುದರಿಂದ ನಾವು ಸದಾ ಯೋಚನೆಗಳ ಸೃಷ್ಟಿ-ಪ್ರಕ್ರಿಯೆಯ ನಡುವೆಯೇ ಬದುಕಬೇಕಾಗುತ್ತದೆ. ಈ ಯೋಚನೆಗಳು ಯಾವುದೋ ಯೋಜನೆಯ ರೂಪಣೆಗೆ, ಯಾವುದೊ ಬಯಕೆಗೆ, ನಂಬಿಕೆಗೆ, ಅನುಭವಕ್ಕೆ, ಜಿಜ್ಞಾಸೆಗೆ, ಆದೇಶಕ್ಕೆ ಸಂಬಂಧಿಸಿರಬಹುದು. ಹೀಗಾಗಿ ಈ ಅರ್ಥದಲ್ಲಿ ಯೋಚನೆಗಳು ಸಹಜ, ಸ್ವಯಂಚಾಲನ ಗುಣದವು. ಹೀಗೆಂದೇ ಸದಾ ಒಂದಿಲ್ಲೊಂದು ಯೋಚನೆ ನಮ್ಮ ಮನಸ್ಸನ್ನು ಆವರಿಸಿಯೇ ಇರುತ್ತದೆ.

ಚಿಂತನೆ, ಆಲೋಚನೆ ಎನ್ನುವುದು ಈ ಯೋಚನೆಗಳನ್ನು ನಿಯಂತ್ರಿಸುವ ಒಂದು ಮಾರ್ಗ. ನಾವು ಚಿಂತನ ನಡೆಸುತ್ತ ಹೋದಂತೆ ಈ ಯೋಚನೆಗಳನ್ನು ಕ್ರಮಬದ್ಧಗೊಳಿಸುತ್ತೇವೆ, ವ್ಯವಸ್ಥಿತವಾಗಿ ಒಂದರ ಹಿಂದೆ ಒಂದನ್ನು ಇರಿಸುತ್ತೇವೆ, ಅಥವಾ ಯೋಚನೆಗಳ ಹೂರಣವನ್ನೆ ಬದಲಾಯಿಸುತ್ತೇವೆ. ಅಂದರೆ, ಚಿಂತನೆ ನಮ್ಮ ಮನಸ್ಸಿನ ಕ್ರಿಯಾಶೀಲ ಪ್ರಕ್ರಿಯೆ. ಇದಕ್ಕೆ ಆಲೋಚನೆ ನಡೆಸುವ ವ್ಯಕ್ತಿಯ ಪ್ರಯತ್ನಬಲಬೇಕು. ಆಟೋಟ ಪಂದ್ಯಗಳಂಥ ಇತರ ಚಟುವಟಿಕೆಗಳಿಗೆ ತರಬೇತಿ ಹೇಗೆ ಅಗತ್ಯವೋ, ಹಾಗೆಯೇ ಚಿಂತನಕ್ಕೂ ತರಬೇತಿ ಅಗತ್ಯ. ಹೇಗೆ ಚಿಂತನೆ ನಡೆಸಬೇಕು, ಚಿಂತನದ ಬೇರೆ ಬೇರೆ ವಿಧಾನಗಳು ಎಂಬ ಬಗ್ಗೆ ನಮಗೆ ಕಲಿಸಿಕೊಡುವವರು ಬೇಕು. ಇಂಥದೆಲ್ಲ ಶಿಕ್ಷಣದಿಂದ ಸಾಧ್ಯ ಎಂಬುದೇ ಸಾಮಾನ್ಯವಾಗಿ ಎಲ್ಲರ ಭಾವನೆ. ಆದರೆ ಇಂದಿನ ಶಿಕ್ಷಣ ಮಾಡುತ್ತಿರುವುದೇನು ಎಂಬುದನ್ನು ನಾವೆಲ್ಲ ಬಲ್ಲೆವು!

ಆಲೋಚಿಸುವುದಕ್ಕೂ ನಮಗೆ ತರಬೇತಿ ಬೇಕೆ? ಚಿಂತನೆಗೆ ಇಷ್ಟೊಂದು ಪ್ರಾಮುಖ್ಯ ಯಾಕೆ? ಏನಿದ್ದರೂ ಈ ಜಗತ್ತಿನಲ್ಲಿ ಬದುಕಿ ಉಳಿಯುವುದಕ್ಕೆ ನಮ್ಮ ಇಂದ್ರಿಯಗಳು ಕ್ರಿಯಾಶೀಲವಾಗಿದ್ದರಷ್ಟೇ ಸಾಕು. ನೋಡಲು, ಕೇಳಲು, ಮುಟ್ಟಲು, ಮೂಸಲು ಹಾಗೂ ರುಚಿ ನೋಡಲು ಸಹಕರಿಸುವ ಐದು ಇಂದ್ರಿಯಗಳಿವೆ ನಮ್ಮ ದೇಹದಲ್ಲಿ. ಇವುಗಳಿಲ್ಲದೆ ನಾವು ಬದುಕಿ ಉಳಿಯಲಾರೆವು. ಒಂದಲ್ಲ ಒಂದು ಇಂದ್ರಿಯದ ಮೂಲಕ ಈ ಜಗತ್ತಿನ ಬಗೆಗಿನ ಮಾಹಿತಿಯನ್ನು ಪಡೆಯುವವರು ನಾವು. ಜಗತ್ತನ್ನು ಕುರಿತ ಜ್ಞಾನ ನಮ್ಮಲ್ಲಿ ಉದಿಸಿ ಬರುವುದು ಈ ಇಂದ್ರಿಯಗಳಿಂದ. ಹಾಗಾಗಿ, ಯಾಕೆ ಬೇಕು ಚಿಂತನೆ?

ಮಾನವ ಜೀವಿಗಳಲ್ಲೊಂದು ಸಾಮರ್ಥ್ಯವಿದೆ. ಇಂದ್ರಿಯಗಳು ನಮಗೇನು ಹೇಳುತ್ತವೆಯೋ ಅದಕ್ಕಿಂತ ಹೆಚ್ಚಿನದನ್ನು ಅರಿಯುವ ಸಾಮರ್ಥ್ಯ. ಉದಾಹರಣೆಗೆ, ಕಟ್ಟಡವೊಂದರಿಂದ ಹೊಗೆಯೇಳುತ್ತಿರುವುದನ್ನು ಕಂಡಾಗ ಅಲ್ಲಿ ಬೆಂಕಿ ಇದೆ ಎಂದು ಕೂಡಲೇ ನಮಗೆ ತಿಳಿದುಬಿಡುತ್ತದೆ. ಬೆಂಕಿಯನ್ನು ಕಣ್ಣಾರೆ ಕಾಣದಿದ್ದರೂ ಬೆಂಕಿ ಇದೆ ನಾವು ಊಹಿಸಿದ್ದು ಹೇಗೆ? ಇಲ್ಲಿ ನಾವು ಬೆಂಕಿಯನ್ನು ಪ್ರತ್ಯಕ್ಷ ಕಾಣುತ್ತಿಲ್ಲ. ಹೀಗಿದ್ದರೂ ಬೆಂಕಿ ಇದೆ ಎಂದು ಅನುಮಾನಿಸಲು ಸಾಧ್ಯವಿದೆ. ಈ ಅನುಮಾನವಿದೆಯಲ್ಲ, ಇದು ನಮ್ಮ ಮನಸ್ಸಿನ ಶಕ್ತಿ. ಕಣ್ಣುಗಳು ಕಾಣಲಾಗದ್ದನ್ನು , ಇತರ ಇಂದ್ರಿಯಗಳು ಗ್ರಹಿಸಲಾಗದ್ದನ್ನು ಕಾಣಬಲ್ಲ, ಗ್ರಹಿಸಬಲ್ಲ ಸಾಮರ್ಥ್ಯ ಇದು. ಇದೇ ರೀತಿ, ಭೌತಿಕ ಚಕ್ಷುವಿಗಿಂತಲೂ ಹೆಚ್ಚಿನದನ್ನು ಕಾಣಬಲ್ಲ ಕಣ್ಣು , ಈ ಮನಸ್ಸು . ಹೀಗೆ, ಚಿಂತನೆಯೆಂದರೆ ಮನಸ್ಸಿನ ಮೂಲಕ ನೋಡಬಲ್ಲ ಪ್ರಕ್ರಿಯೆ.

ನಮಗೆ ಜಗತ್ತಿನ ಬಗ್ಗೆ ಅನೇಕ ಸಂಗತಿಗಳು ಗೊತ್ತು. ನಾವು ತಿಳಿದಿರುವುದರಲ್ಲಿ ಹೆಚ್ಚಿನದು ಲಭಿಸಿರುವುದು ನಮ್ಮ ಇಂದ್ರಿಯಗಳ ಮೂಲಕ. ಆದರೆ ಆಲೋಚನೆ/ಚಿಂತನೆಯ ಮೂಲಕ ಇನ್ನಷ್ಟು ಹೆಚ್ಚಿನದನ್ನು ನಾವು ಗ್ರಹಿಸಬಲ್ಲೆವು. ಕಾಲ ಅಥವಾ ದೇಶ (ಟೈಮ್‌ ಆ್ಯಂಡ್‌ ಸ್ಪೇಸ್‌)ಗಳನ್ನು ಕಣ್ಣಿಂದ ಇಲ್ಲವೇ ಇಂದ್ರಿಯಗಳ ಮೂಲಕ ಕಾಣಲಾರೆವು, ಗ್ರಹಿಸಲಾರೆವು. ಆದರೆ ಅವು ನಿಜಕ್ಕೂ ಇವೆ ಎಂದು ನಂಬಿದ್ದೇವೆ. ಗಣಿತ ಶಾಸ್ತ್ರದಲ್ಲಿ ಬರುವ ಅಂಕೆಸಂಖ್ಯೆಗಳನ್ನು ನಾವು ಅನುಭವಿಸಲಾರೆವು; ಆದರೆ ಅವುಗಳನ್ನು ಕಂಡುಹಿಡಿದು ಎಲ್ಲ ವಿದ್ಯಾರ್ಥಿಗಳಿಗೂ ಬೋಧಿಸಬಲ್ಲೆವು. ದೇವರನ್ನು ತಮ್ಮ ಸುತ್ತಲಿನ ವಸ್ತು ಸಮಸ್ತವನ್ನು ನೋಡಿದಂತೆ ನೋಡಲಾಗದು; ಆದರೆ ದೇವರು ಇದ್ದಾನೆಂಬ ಅರಿವು ಅನೇಕರಿಗಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಮಗೆ ನಂಬಿಕೆಯೆಂಬುದಿದ್ದಲ್ಲಿ ಪಂಚೇಂದ್ರಿಯಗಳ ಮೂಲಕ ಗ್ರಹಿಸಲಾಗದ ಅನೇಕ ಸತ್ಯಗಳನ್ನೂ ನಮ್ಮ ಅರಿವಿಗೆ ತಂದುಕೊಳ್ಳಬಲ್ಲೆವು. ಭಾಷೆಗೆ ಇರುವ ಸಾಮರ್ಥ್ಯ ಕೂಡ ಮನಸ್ಸಿನ ಉತ್ಪನ್ನವೇ ಹೊರತು ಪಂಚೇಂದ್ರಿಯಗಳ ಉತ್ಪನ್ನ ಅಲ್ಲ ಎಂದೂ ಕೆಲವರು ವಾದಿಸುವುದುಂಟು.
ಪಾಶ್ಚಾತ್ಯ ತಣ್ತೀಶಾಸ್ತ್ರಜ್ಞರ ಮಧ್ಯೆ ದೊಡ್ಡ ಚರ್ಚೆಯೊಂದು ನಡೆದಿರುವುದುಂಟು. ಜಗತ್ತಿನ ಜ್ಞಾನವೆಲ್ಲವನ್ನೂ ಗ್ರಹಿಸುವುದು ಐದು ಇಂದ್ರಿಯಗಳ ಆಧಾರದಲ್ಲೇ ಎಂಬುದು ಒಂದು ಗುಂಪಿನವರ ವಾದ. ಹಾಗಲ್ಲ, ಎಲ್ಲ ಜ್ಞಾನವನ್ನೂ ಸೃಜಿಸುವುದಕ್ಕೆ ಕೇವಲ ಮನಸ್ಸೊಂದೇ ಧಾರಾಳ ಸಾಕು ಎಂಬುದು ಇನ್ನೊಂದು ತಂಡದವರ ವಾದ. ಮೊದಲ ಗುಂಪಿನವರನ್ನು ಅನುಭವ ಸಿದ್ಧಾಂತಿ/ಅನುಭವೈಕವಾದಿ (ಎಂಪಿರಿಸಿಸ್ಟ್‌)ಗಳೆಂದು ಕರೆಯುತ್ತಾರೆ. ಇನ್ನೊಂದು ಗುಂಪಿನವರನ್ನು ಯುಕ್ತಿ ಪ್ರಮಾಣವಾದಿ/ವಿಚಾರವಾದಿ (ರ್ಯಾಶನ್ಯಾಲಿಸ್ಟ್‌)ಗಳೆನ್ನುತ್ತಾರೆ. ವಿಚಾರವಾದಿಗಳಿಗೆ ದೊಡr ಬೆಂಬಲ ಸಿಕ್ಕಿದ್ದು ಗಣಿತ ಶಾಸ್ತ್ರದ ಯಥಾರ್ಥ ವಾದದಿಂದ ಹೇಗೋ ಹಾಗೇ ದೈವ ದೇವರುಗಳನ್ನು ಕುರಿತ ಅರಿವಿನ ಹಿನ್ನೆಲೆಯಿಂದ ಕೂಡ. ಎರಡೂ ವಾದಗಳ ಹಿಂದೆ, ಇಂಥ ಅರಿವು ಲಭಿಸುವುದು ಇಂದ್ರಿಯಾನುಭವದಿಂದಲ್ಲ, ಮನಸ್ಸಿನ ಚಿಂತನದಿಂದ ಎಂಬ ನಂಬಿಕೆ ಇತ್ತು. ಈ ಚರ್ಚೆಯನ್ನಿಲ್ಲಿ ಉಲ್ಲೇಖೀಸಿದ್ದಕ್ಕೆ ಕಾರಣವಿದೆ - ಇದು ಆಧುನಿಕ ಶಿಕ್ಷಣದ ಮೇಲೆ ಪೂರ್ಣ ಮಟ್ಟದಲ್ಲಿ ತನ್ನ ಪ್ರಭಾವವನ್ನು ಬೀರಿದೆ.

ತರ್ಕ ಅಥವಾ ನ್ಯಾಯಶಾಸ್ತ್ರದ ಅಧ್ಯಯನವೆಂದರೆ ಅನುಮಾನ-ನಿರ್ಣಯ ಕುರಿತ ಅಧ್ಯಯನ. ಅರ್ಥಾತ್‌, ಚಿಂತನೆ/ಆಲೋಚನೆಯ ಸ್ವಭಾವ-ಸ್ವರೂಪದ ಅಧ್ಯಯನ. ತರ್ಕಶಾಸ್ತ್ರವು ಚಿಂತನೆಯ ಕ್ರಮಗಳೊಂದಿಗೆ ಸಂಬಂಧ ಹೊಂದಿದೆ. ನಮ್ಮ ಆಲೋಚನೆಗಳು ಹೇಗಿರಬೇಕೆಂಬುದನ್ನು ನಿಗದಿಸುವ ಕ್ರಮನಿಯಮಗಳಿವೆಯೆ? ಚಿಂತನೆಯನ್ನು ಯಾವುವೋ ರಹಸ್ಯ ನಿಯಮಗಳು ನಿಯಂತ್ರಿಸುತ್ತವೆಂಬುದು ನಿಜವೆ? ವ್ಯಕ್ತಿಯ ಆಲೋಚನೆಯನ್ನು , ಚಿಂತನ ಕ್ರಮಗಳು ಎಷ್ಟರ ಮಟ್ಟಿಗೆ ನಿಯಂತ್ರಿಸುತ್ತವೆ ಎಂಬುದನ್ನು ತರ್ಕಶಾಸ್ತ್ರ ತಿಳಿಸಿಕೊಡುತ್ತದೆ. ಈ ನಿಯಮಗಳನ್ನು ಮುಂದಿನ ಬರಹದಲ್ಲಿ ಚರ್ಚಿಸಲಿದ್ದೇನೆ.

ತಣ್ತೀಶಾಸ್ತ್ರದ ಅರಿವಿನ ಆರಂಭ, ಅನುಮಾನ-ನಿರ್ಣಯ ಕುರಿತ ಅಧ್ಯಯನದಿಂದ. ತರ್ಕಶಾಸ್ತ್ರದ ಅಧ್ಯಯನದೊಂದಿಗೆ ತಳುಕು ಹಾಕಿಕೊಂಡಿರುವ ಪ್ರಖ್ಯಾತ ಹೆಸರೆಂದರೆ ಗ್ರೀಕ್‌ ತಣ್ತೀಶಾಸ್ತ್ರಜ್ಞನಾದ ಅರಿಸ್ಟಾಟಲ್‌ ಮಹಾಶಯನದು - ಎನ್ನುತ್ತವೆ ಹೆಚ್ಚಿನ ಪಠ್ಯಪುಸ್ತಕಗಳು. ಆದರೆ ಎಲ್ಲ ಭಾರತೀಯ ತಣ್ತೀಜ್ಞಾನ ವಿಭಾಗಗಳೂ ತರ್ಕಶಾಸ್ತ್ರದೊಂದಿಗೆ ಆಳವಾದ ಸಂಬಂಧ ಹೊಂದಿವೆ ಎಂಬುದನ್ನು ನಾವು ಬಲ್ಲೆವು. ಭಾರತದ ತಣ್ತೀಶಾಸ್ತ್ರಾಧ್ಯಯನ ಕ್ಷೇತ್ರದಲ್ಲಿ "ನ್ಯಾಯ' ಎಂಬ ವಿಶೇಷ ಜ್ಞಾನ ಶಾಖೆಯಿದೆ. ತಣ್ತೀಶಾಸ್ತ್ರಕ್ಕೆ ಅದರ ಕೊಡುಗೆ ಅಗಾಧ. ಬೌದ್ಧರು ನ್ಯಾಯ ಸಿದ್ಧಾಂತದ ಮೇಲೆ ಹೊಸದೇ ಆದ ಚಿಂತನೆ ನಡೆಸಿ ಇನ್ನೊಂದೇ ಸಶಕ್ತ ತರ್ಕಶಾಸ್ತ್ರವನ್ನು ರೂಪಿಸಿದರು. ಶಂಕರ, ರಾಮಾನುಜ, ಮಧ್ವರಂಥ ಆಚಾರ್ಯರುಗಳನ್ನೊಳಗೊಂಡ ವೇದಾಂತಿಗಳು ಜಗತ್ತಿನ ಶ್ರೇಷ್ಠ ತರ್ಕಶಾಸ್ತ್ರ ಪಂಡಿತರಾಗಿದ್ದರು. ಅವರೆಲ್ಲರೂ ಚಿಂತನೆಯ ನಿಜಸ್ವಭಾವವೇನೆಂಬುದನ್ನು ಅರ್ಥಮಾಡಿಕೊಳ್ಳಲು ತಮ್ಮ ತಮ್ಮ ನೆಲೆಗಳಲ್ಲಿ ಪ್ರಯತ್ನಿಸಿದವರೇ.

No comments:

Post a Comment